ಸಂಸದರ ಆದರ್ಶ ಗ್ರಾಮ ಯೋಜನೆಯನ್ನು ಆರಂಭಿಸುವಾಗ, ನರೇಂದ್ರ ಮೋದಿ ಅವರು ಯೋಜನೆ ಕುರಿತು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರು.
"ನಮ್ಮ ಅಭಿವೃದ್ಧಿ ಮಾದರಿಯ ಅತ್ಯಂತ ದೊಡ್ಡ ಸಮಸ್ಯೆ ಎಂದರೆ ಅದು ಪೂರೈಕೆಯನ್ನು ಆಧರಿಸಿರುವಂಥದ್ದು. ಲಖನೌ, ಗಾಂಧಿನಗರ ಇಲ್ಲವೇ ದಿಲ್ಲಿ ಯಲ್ಲಿ ಯೋಜನೆಯೊಂದನ್ನು ರೂಪಿಸಲಾಗುತ್ತದೆ. ನಂತರ ಅದನ್ನು ಎಲ್ಲೆಡೆ ಹೇರಲಾಗುತ್ತದೆ. ಆದರ್ಶ ಗ್ರಾಮ ಯೋಜನೆ ಮೂಲಕ ಪೂರೈಕೆ ಆಧರಿಸಿದ ಮಾದರಿಯನ್ನು ಬೇಡಿಕೆಯನ್ನು ಆಧರಿಸಿದ ಮಾದರಿಯನ್ನಾಗಿ ಬದಲಿಸುವುದು ನಮ್ಮ ಉದ್ದೇಶ. ನಮ್ಮ ಗ್ರಾಮ ಅಭಿವೃದ್ಧಿ ಹೊಂದಬೇಕು ಎಂಬುದು ಗ್ರಾಮಸ್ಥರಲ್ಲೇ ಮೂಡಬೇಕು"
"ನಾವು ನಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕು. ಜನರ ಹೃದಯಗಳನ್ನು ಬೆಸೆಯಬೇಕಿದೆ. ಸಾಮಾನ್ಯವಾಗಿ ಸಂಸದರು ರಾಜಕೀಯ ಚಟುವಟಿಕೆ ಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಈ ಯೋಜನೆ ಜಾರಿ ಬಳಿಕ ಅವರು ನಿಮ್ಮ ಹಳ್ಳಿಗೆ ಬಂದಾಗ,ರಾಜಕೀಯ ಚಟುವಟಿಕೆ ನಡೆಸುವುದಿಲ್ಲ. ಗ್ರಾಮ ಒಂದು ಕುಟುಂಬದಂತೆ ಆಗಲಿದೆ.
ನಿರ್ಧಾರಗಳನ್ನು ಗ್ರಾಮಸ್ಥರ ಜೊತೆ ಕುಳಿತು ತೆಗೆದುಕೊಳ್ಳಲಾಗುತ್ತದೆ. ಇದರಿಂದ ಗ್ರಾಮಗಳಲ್ಲಿ ಉತ್ಸಾಹ ಹೆಚ್ಚಲಿದೆ ಹಾಗೂ ಗ್ರಾಮ ಒಗ್ಗಟ್ಟಾಗಲಿದೆ'.
ಸಂಸದರ ಆದರ್ಶ ಗ್ರಾಮ ಯೋಜನೆ(ಎಸ್ಎಜಿವೈ)ಯನ್ನು 11 ಅಕ್ಟೋಬರ್ 2014ರಲ್ಲಿ ಆರಂಭಿಸಲಾಯಿತು. ಮಹಾತ್ಮ ಗಾಂಧಿ ಅವರ ಆದರ್ಶ ಗ್ರಾಮ ಕಲ್ಪನೆಯನ್ನು ಪ್ರಸ್ತುತಕ್ಕೆ ಅನ್ವಯಿಸುವುದು ಯೋಜನೆಯ ಉದ್ದೇಶ. ಎಸ್ಎಜಿವೈ ಅಡಿ ಪ್ರತಿ ಸಂಸದ ಗ್ರಾಮ ಪಂಚಾಯಿತಿಯೊಂದನ್ನು ದತ್ತು ತೆಗೆದುಕೊಂಡು,ಮೂಲಸೌಲಭ್ಯಕ್ಕೆ ಅನುಗುಣವಾಗಿ ಸಂಪೂರ್ಣ ಸಾಮಾಜಿಕ ಅಭಿವೃದ್ಧಿ ಆಗುವಂತೆ ನೋಡಿಕೊಳ್ಳಬೇಕು.
"ಆದರ್ಶ ಗ್ರಾಮ'ಗಳು ಸ್ಥಳೀಯ ಅಭಿವೃದ್ಧಿ ಮತ್ತು ಆಡಳಿತಕ್ಕೆ ಮಾದರಿ ಆಗಬೇಕು, ಇತರ ಗ್ರಾಮ ಪಂಚಾಯಿತಿಗಳಿಗೆ ಸ್ಫೂರ್ತಿ ತುಂಬಬೇಕು ಎಂಬುದು ಉದ್ದೇಶ.
ವೈಜ್ಞಾನಿಕ ಸಾಧನಗಳನ್ನು ಬಳಸಿಕೊಂಡು ಹಾಗೂ ಗ್ರಾಮಸ್ಥರನ್ನು ಒಳಗೊಂಡು,ಸಂಸದರ ನೇತೃತ್ವದಲ್ಲಿ ಗ್ರಾಮ ಅಭಿವೃದ್ಧಿ ಯೋಜನೆಯನ್ನು ರೂಪಿಸಲಾ ಗುತ್ತದೆ. ಬಳಿಕ ಸುದೀರ್ಘ ಯೋಜನಾ ವರದಿಯನ್ನು ತಯಾರಿಸಿ, ಇಲಾಖೆಗಳು ರಾಜ್ಯ ಸರಕಾರಕ್ಕೆ ಸಲ್ಲಿಸುತ್ತವೆ. ರಾಜ್ಯ ಮಟ್ಟದ ಸಮಿತಿ(ಎಸ್ಎಲ್ಇಸಿ) ವರದಿಯನ್ನು ಪರಿಶೀಲಿಸಿ, ಬದಲಾವಣೆಗಳನ್ನು ಸೂಚಿಸಿ,ಸಂಪನ್ಮೂಲವನ್ನು ಹಂಚುತ್ತದೆ. ಭಾರತ ಸರಕಾರದ ಇಲಾಖೆಗಳು/ಮಂತ್ರಾಲಯಗಳು ಈವರೆಗೆ 21 ಯೋಜನೆಗಳಿಗೆ ತಿದ್ದುಪಡಿ ತಂದು, ಎಸ್ಎಜಿವೈ ಗ್ರಾಮ ಪಂಚಾಯಿತಿ ಯೋಜನೆಗಳಿಗೆ ಪ್ರಾಶಸ್ತ್ಯ ನೀಡಿವೆ.
ಜಿಲ್ಲಾ ಹಂತದಲ್ಲಿ ಸಂಸದರ ಅಧ್ಯಕ್ಷತೆಯಲ್ಲಿ ನಡೆಯುವ ಮಾಸಿಕ ಸಭೆಯಲ್ಲಿ ಗ್ರಾಪಂ ಅಭಿವೃದ್ಧಿ ಯೋಜನೆಗಳ ಪ್ರಗತಿಯನ್ನು ಪರಾಮರ್ಶಿಸಲಾಗುತ್ತದೆ.
ಪ್ರತಿ ಯೋಜನೆಯ ಪ್ರಗತಿಯನ್ನು ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಪರಿಶೀಲಿಸಿ, ಈ ಬಗ್ಗೆ ವರದಿಯನ್ನು ರಾಜ್ಯ ಸಕರ್ಾರಕ್ಕೆ ಸಲ್ಲಿಸಲಾಗುತ್ತದೆ.
ಎಲ್ಲ ಸಂಸದರು 2016ರೊಳಗೆ ಒಂದು ಗ್ರಾಪಂ, 2019ರೊಳಗೆ 2 ಹಾಗೂ 2024ರೊಳಗೆ 5 ಗ್ರಾಪಂಗಳನ್ನು ಮಾದರಿಯಾಗಿ ರೂಪಿಸಬೇಕೆಂದು ನಿರೀಕ್ಷಿಸ ಲಾಗಿದೆ. ಯೋಜನೆಯಡಿ ದೇಶದೆಲ್ಲೆಡೆ 696 ಗ್ರಾಪಂಗಳನ್ನು ಸಂಸದರು ದತ್ತು ತೆಗೆದುಕೊಂಡು ಅಭಿವೃದ್ಧಿಗೊಳಿಸುತ್ತಿದ್ದಾರೆ.