ಜಪಾನ್- ಭಾರತ ಸಂಸದೀಯ ಪಟುಗಳ ಸ್ನೇಹಕೂಟ (ಜೆಐಪಿಎಫ್.ಎಲ್.) ನಿಯೋಗ ಇಂದು ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿತು.
ಈ ನಿಯೋಗದ ನೇತೃತ್ವವನ್ನು ಶ್ರೀ ಹಿರಿಯುಕಿ ಹೊಸೋದಾ ವಹಿಸಿದ್ದರು, ಮತ್ತು ಇದರಲ್ಲಿ ಶ್ರೀ ಕಟ್ಸುಯಾ ಒಕಾಡಾ, ಮಸಹರು ನಕಗವಾ, ಶ್ರೀ. ನವೋಕಜು ತಕೇಮೊಟೋ ಮತ್ತು ಶ್ರೀ ಯೋಶಿಯಾಕಿ ವಡ ಅವರಿದ್ದರು.
ಜೆಐಪಿಎಫ್ಎಲ್ ನಿಯೋಗವು ಜಮ್ಮು ಕಾಶ್ಮೀರದ ಉರಿಯಲ್ಲಿ 2016ರ ಸೆಪ್ಟೆಂಬರ್ 18ರಂದು ನಡೆದ ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ಬಲಿಯಾದವರಿಗೆ ಸಂತಾಪ ಸೂಚಿಸಿದರು.
ಜಾಗತಿಕ ಪಿಡುಗಾಗಿರುವ ಭಯೋತ್ಪಾದನೆಯ ವಿರುದ್ಧ ಹೆಚ್ಚಿನ ಅಂತಾರಾಷ್ಟ್ರೀಯ ಸಹಕಾರಕ್ಕೆ ಮತ್ತು ಭಯೋತ್ಪಾದನೆಯನ್ನು ಪ್ರಾಯೋಜಿಸುವ ರಾಷ್ಟ್ರಗಳನ್ನು ಪ್ರತ್ಯೇಕವಾಗಿ ಇಡುವ ಪ್ರಯತ್ನಕ್ಕೆ ಪ್ರಧಾನಮಂತ್ರಿಯವರು ನೀಡಿರುವ ಕರೆಯನ್ನು ಜೆಐಪಿಎಫ್ಎಲ್ ನಿಯೋಗವು ಸ್ವಾಗತಿಸಿತು.
ಪ್ರಧಾನಮಂತ್ರಿಯವರು 2014ರಲ್ಲಿ ತಾವು ಜಪಾನ್ ಗೆ ನೀಡಿದ್ದ ಯಶಸ್ವಿ ಭೇಟಿ ಹಾಗೂ ಆ ಸಂದರ್ಭದಲ್ಲಿ ಜೆಐಪಿಎಫ್ಎಲ್ ಜೊತೆ ಟೋಕಿಯೋದಲ್ಲಿ ನಡೆಸಿದ ಸಂವಾದವನ್ನು ಸ್ಮರಿಸಿದರು. ಭಾರತ ಮತ್ತು ಜಪಾನ್ ಮುಂಬರುವ ದಶಕಗಳಿಗಾಗಿಗ ಹಲವು ಕ್ಷೇತ್ರಗಳಲ್ಲಿನ ಸಹಕಾರಕ್ಕೆ ಭದ್ರ ಬುನಾದಿ ಹಾಕಿದೆ ಎಂದು ಹೇಳಿದರು.
ಜೆಐಪಿಎಫ್ಎಲ್ ನಿಯೋಗವು ಜಪಾನ್ ಮತ್ತು ಭಾರತ ನಡುವಿನ ಸಂಬಂಧಗಳನ್ನು ಬಲಪಡಿಸುವ ಜಪಾನ್ ನ ಬಲವಾದ ಉಭಯಪಕ್ಷೀಯ ಬೆಂಬಲವಿದೆ ಎಂಬುದನ್ನು ತಿಳಿಯಪಡಿಸಿತು, ಮತ್ತು ಉನ್ನತ ತಂತ್ರಜ್ಞಾನ ಸಹಕಾರ ಅದರಲ್ಲೂ ವಿಶೇಷವಾಗಿ ಹೈ ಸ್ಪೀಡ್ ರೈಲ್ವೆಯಲ್ಲಿ ಆಗಿರುವ ಪ್ರಗತಿಯನ್ನು ಸ್ವಾಗತಿಸಿತು.
ಪ್ರಧಾನಮಂತ್ರಿಯವರು ಜಪಾನ್ ಪ್ರಧಾನಿ ಅಬೆ ಅವರ 2015ರ ಭಾರತ ಭೇಟಿಯನ್ನು ಸ್ಮರಿಸಿ, ಇದು ನಮ್ಮ ದ್ವಿಪಕ್ಷೀಯ ಬಾಂಧವ್ಯದ ಇತಿಹಾಸದಲ್ಲಿ ಮೈಲಿಗಲ್ಲಾದ ಭೇಟಿ ಎಂದರು ಮತ್ತು ಹತ್ತಿರದ ಭವಿಷ್ಯದಲ್ಲೇ ತಾವು ಜಪಾನ್ ಗೆ ಭೇಟಿ ನೀಡಲು ಎದುರು ನೋಡುತ್ತಿರುವುದಾಗಿ ತಿಳಿಸಿದರು.