‘ಗಂಗೆ ಮಾತೆಯ ಸೇವೆ ಮಾಡುವುದೇ ನನ್ನ ಗುರಿ’ ಎಂದು ಪ್ರಧಾನಿ ನರೇಂದ್ರ ಮೋದಿಯವರು ಮೇ 2014 ರಲ್ಲಿ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾದಾಗ ಹೃದಯ ತುಂಬಿ ನುಡಿದಿದ್ದರು.
ಗಂಗಾ ನದಿ ಕೇವಲ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರಣಗಳಿಗಾಗಿ ಮುಖ್ಯವಲ್ಲ ; ದೇಶದ ಶೇ. 40 ರಷ್ಟು ಜನಸಂಖ್ಯೆಗೆ ನೀರುಣಿಸುವ ಮಹಾಮಾತೆ. 2014ರಲ್ಲಿ ನ್ಯೂಯಾರ್ಕಿನ ಮ್ಯಾಡಿಸನ್ ಸ್ಕಯರ್ ಗಾರ್ಡನ್ ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಾ ಮೋದಿಯವರು, ‘ಗಂಗಾನದಿಯನ್ನು ಸ್ವಚ್ಛಗೊಳಿಸಲು ನಮ್ಮಿಂದ ಸಾಧ್ಯವಾದಲ್ಲಿ, ಅದು ದೇಶದ ಶೇ. 40 ರಷ್ಟು ಜನಸಮುದಾಯಕ್ಕೆ ಮಾಡುವ ಮಹದುಪಕಾರ. ಹಾಗಾಗಿ ಗಂಗೆಯನ್ನು ಸ್ವಚ್ಛಗೊಳಿಸುವುದು ಕೇವಲ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಸೂಚಿಯಲ್ಲ ; ಬದಲಾಗಿ ಆರ್ಥಿಕ ಕಾರ್ಯಸೂಚಿ’ ಎಂದಿದ್ದರು.
ಈ ದೂರದಷ್ಟಿಯನ್ನು ಕಾರ್ಯರೂಪಕ್ಕಿಳಿಸುವ ಸಲುವಾಗಿಯೇ ಕೇಂದ್ರ ಸರಕಾರ, ಸಮಗ್ರ ಗಂಗಾ ಸಂರಕ್ಷಣಾ ಮಿಷನ್ “ನಮಾಮಿ ಗಂಗೆ’ಯನ್ನು ಘೋಷಿಸಿತು. ಗಂಗೆಯ ಮಾಲಿನ್ಯ ತಡೆದು ಅದನ್ನು ಪುನರುಜ್ಜೀವನಗೊಳಿಸುವುದು ಮಿಷನ್ ನ ಉದ್ದೇಶ. ಕೇಂದ್ರ ಸಚಿವ ಸಂಪುಟ 2019-2020 ರವರೆಗೆ 20 ಸಾವಿರ ಕೋಟಿ ರೂ. ಗಳ ಕ್ರಿಯಾಯೋಜನೆಯನ್ನು ಅನುಮೋದಿಸಿತು. ನಾಲ್ಕರಷ್ಟು ಅನುದಾನವನ್ನು ಹೆಚ್ಚಿಸಿತಲ್ಲದೇ, ಶೇ. 100 ರಷ್ಟು ಅಂದರೆ ಸಂಪೂರ್ಣವಾಗಿ ಕೇಂದ್ರ ಸರಕಾರವೇ ಭರಿಸುವುದಾಗಿ ಪ್ರಕಟಿಸಿತು.
ಗಂಗೆಯ ಪುನರುಜ್ಜೀವನದ ನೆಲೆಯಲ್ಲಿ ಇರಬಹುದಾದ ಬಹು ಆಯಾಮದ, ಬಹು ವಲಯದ ಹಾಗೂ ಬಹು ಪಾಲುದಾರಿಕೆಯ ಸವಾಲುಗಳನ್ನು ಗುರುತಿಸುವ ಸಲುವಾಗಿಯೇ, ಅಂತರ್ ಸಚಿವಾಲಯ, ಕೇಂದ್ರ ಮತ್ತು ರಾಜ್ಯ ಸರಕಾರ ನಡುವಿನ ಸಮನ್ವಯ ಸುಧಾರಣೆಗೆ ಗಮನ ನೀಡಲಾಯಿತು. ಕ್ರಿಯಾ ಯೋಜನೆ ರೂಪಿಸುವಲ್ಲಿ ಎಲ್ಲರನ್ನೂ ಪರಿಗಣಿಸಿದ್ದಲ್ಲದೇ, ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಉಸ್ತುವಾರಿ ನೆಲೆಯಲ್ಲೂ ಸಾಕಷ್ಟು ಸುಧಾರಣೆಗಳನ್ನು ತರಲಾಯಿತು.
ಇಡೀ ಯೋಜನೆಯನ್ನು ಅತಿ ತುರ್ತು(ಕೂಡಲೇ ಆಗಬೇಕಾದದ್ದು, ಕಣ್ಣಿಗೆ ಕಾಣುವಂಥದ್ದು), ತುರ್ತು (ಐದು ವರ್ಷಗಳ ಕಾಲಾವಧಿಯೊಳಗೆ) ಹಾಗೂ ದೀರ್ಘಾವಧಿಯ ಹಂತಗಳಲ್ಲಿ (ಹತ್ತು ವರ್ಷದೊಳಗೆ) ಜಾರಿಗೊಳಿಸಲು ನಿರ್ಧರಿಸಿ ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ.
ಅತಿ ತುರ್ತು ಅಥವಾ ಪ್ರವೇಶ ಹಂತದಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಾಳೆಂದರೆ, ನದಿಗೆ ಸೇರುತ್ತಿರುವ ಘನ ತ್ಯಾಜ್ಯಗಳಿಗೆ ತಡೆ, ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಾಣ, ದುರಸ್ತಿಗೊಳಿಸುವಿಕೆ, ಆಧುನೀಕರಣ, ಚಿತಾಗಾರಗಳ ನಿರ್ಮಾಣದ ಮೂಲಕ ಅನೈರ್ಮಲ್ಯ ಮತ್ತು ಅರ್ಧ ಸುಟ್ಟ ಹೆಣಗಳನ್ನು ನದಿಗೆ ಬಿಡುವಂಥ ಪ್ರಮೇಯಗಳಿಗೆ ಮುಕ್ತಿ ಹಾಡುವ ಮೂಲಕ ಪ್ರದೇಶಗಳ ತ್ಯಾಜ್ಯಗಳು ಸೇರದಂತೆ ತಡೆಯುವುದು, ಘಾಟ್ ಗಳ ದುರಸ್ತಿ, ಆಧುನೀಕರಣ ಮತ್ತು ಸೂಕ್ತ ಪುನರ್ ನಿರ್ಮಾಣದ ಮೂಲಕ ಮನುಷ್ಯ ಮತ್ತು ನದಿಯ ಸಂಬಂಧವನ್ನು ಗಟ್ಟಿಗೊಳಿಸುವುದು.
ತುರ್ತು (ಮಧ್ಯಮ) ನೆಲೆಯಲ್ಲಿ ಕೈಗೊಳ್ಳಲು ಉದ್ದೇಶಿಸಿರುವದೆಂದರೆ: ಪುರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಮತ್ತು ಕೈಗಾರಿಕಾ ತ್ಯಾಜ್ಯ ನದಿಗೆ ಸೇರದಂತೆ ತಡೆಯುವುದು. ಸ್ಥಳೀಯ ಸಂಸ್ಥೆಗಳ ಒಳಚರಂಡಿಯಿಂದ ಸೇರುವ ಮಾಲಿನ್ಯವನ್ನು ತಡೆಯಲು, ಮುಂದಿನ ಐದು ವರ್ಷಗಳಲ್ಲಿ 2500 ಎಂಎಲ್ ಡಿ ಹೆಚ್ಚುವರಿ ತಾಜ್ಯ ಸಂಸ್ಕರಣಾ ಘಟಕಗಳನ್ನು ನಿರ್ಮಿಸಬೇಕಿದೆ. ದೀರ್ಘಾವಧಿಯಲ್ಲಿ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿ, ಸುಸ್ಥಿರವಾಗಿಡಲು ಆರ್ಥಿಕ ಸುಧಾರಣಾ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ. ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಡಿ ಯೋಜನೆ ಜಾರಿಗೊಳಿಸುವ ಸಂಬಂಧವೂ ಕೇಂದ್ರ ಸಚಿವ ಸಂಪುಟ ಆಲೋಚಿಸಿದೆ. ಒಂದುವೇಳೆ ಅದಕ್ಕೆ ಅನುಮೋದನೆ ದೊರೆತೆರೆ ಈ ಯೋಜನೆ ಜಾರಿಗೊಳಿಸಲು ವಿಶೇಷ ಉದ್ದೇಶಿತ ವಾಹನವನ್ನು ರಚಿಸಲಾಗುವುದು. ಆದು ಎಲ್ಲ ನಗರಗಳ ತ್ಯಾಜ್ಯ ವಿಲೇವಾರಿ ನಿರ್ವಹಣೆ ಬಗ್ಗೆ ಗಮನಹರಿಸಲಿದೆ. ತ್ಯಾಜ್ಯ ಸಂಸ್ಕರಿತ ನೀರಿಗೂ ಮಾರುಕಟ್ಟೆ ಒದಗಿಸುವುದಲ್ಲದೇ, ದೀರ್ಘಾವಧಿ ಬಾಳುವ ಸುಸ್ಥಿರವಾದ ಆಸ್ತಿಗಳನ್ನು ನಿರ್ಮಿಸಲಾಗುವುದು.
ಕೈಗಾರಿಕಾ ತ್ಯಾಜ್ಯಗಳ ನಿರ್ವಹಣೆಗೆ ನಿಯಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗುವುದು. ಗಂಗೆಯ ಸುತ್ತಮುತ್ತ ಹೆಚ್ಚು ಮಾಲಿನ್ಯ ಉಂಟು ಮಾಡುತ್ತಿರುವ ಕೈಗಾರಿಕೆಗಳಿಗೆ ತ್ಯಾಜ್ಯಗಳ ಪ್ರಮಾಣ ಕಡಿಮೆ ಮಾಡಲು ಸೂಚಿಸುವುದು, ಅದರ ಅಪಾಯಕಾರಿ ಮಟ್ಟವನ್ನು ಕಡಿಮೆಮಾಡಲು ಗುಣಾತ್ಮಕ ಕ್ರಮಗಳನ್ನು ಕೈಗೊಳ್ಳಲು ಸೂಚಿಸುವುದು, ಶೂನ್ಯ ದ್ರವ ರೂಪದ ತ್ಯಾಜ್ಯ ವಿಸರ್ಜನೆಗೆ ಮುಂದಾಗುವಂತೆ ಆದೇಶಿಸುವುದು. ಈ ಉದ್ದೇಶಗಳ ಕಾರ್ಯ ಸಾಧನೆಗೆ ಈಗಾಗಲೇ ಮಾಲಿನ್ಯ ನಿಯಂತ್ರಣ ಮಂಡಳಿಗಳು ಕ್ರಿಯಾ ಯೋಜನೆಯನ್ನು ರಚಿಸಿದ್ದು, ಕಾಲಾವಧಿ ಕಾರ್ಯಕ್ರಮಗಳನ್ನೂ ರೂಪಿಸಿವೆ. ಪ್ರತಿ ವಿಭಾಗದ ಕೈಗಾರಿಕೆಗಳಿಗೂ ಸವಿವರವಾದ ಸಲಹೆಗಳನ್ನು ನೀಡಲಾಗಿದೆ. ಎಲ್ಲ ಕೈಗಾರಿಕೆಗಳೂ ವಿದ್ಯುನ್ಮಾನ (ಆನ್ ಲೈನ್)ತ್ಯಾಜ್ಯ ಉಸ್ತುವಾರಿ ಕೇಂದ್ರಗಳನ್ನು ಸ್ಥಾಪಿಸಲು ಸೂಚಿಸಲಾಗಿದೆ.
ಇದಲ್ಲದೇ, ಜೈವಿಕ ವೈವಿಧ್ಯ ಸಂರಕ್ಷಣೆ, ಅರಣ್ಯೀಕರಣ ಹಾಗೂ ನೀರಿನ ಗುಣಮಟ್ಟ ಉಸ್ತುವಾರಿ ಕೇಂದ್ರಗಳನ್ನೂಇದೇ ಯೋಜನೆಯಡಿ ಸ್ಥಾಪಿಸಲಾಗುತ್ತಿದೆ. ಹಾಗೆಯೇ ಸಿಹಿನೀರಿನ ಗೋಲ್ಡನ್ ಮಹಾಶೀರ್ (ಮೀನುಗಳು), ಡಾಲ್ಪನ್ಸ್, ಮಹಾ ಮಕರಗಳು, ಆಮೆಗಳು, ನೀರು ನಾಯಿಗಳಂಥ ಅಪರೂಪದ ಪ್ರಬೇಧಗಳನ್ನು ಸಂರಕ್ಷಣೆಗೂ ಕ್ರಮ ಜರುಗಿಸಲಾಗುತ್ತಿದೆ. ಅದರಂತೆಯೇ ನಮಾಮಿ ಗಂಗೆಯಡಿ, 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯೀಕರಣ ಮಾಡಲಾಗುತ್ತಿದೆ. ಈ ಮೂಲಕ ಮಣ್ಣು ಸವಕಳಿಯನ್ನು ತಡೆದು ನದಿ ಸುತ್ತಮುತ್ತಲ ಪಾರಿಸರಿಕ ವ್ಯವಸ್ಥೆಯನ್ನು ಸದೃಢಗೊಳಿಸುವ ಉದ್ದೇಶ ಹೊಂದಲಾಗಿದೆ. 2016 ರಿಂದ ಈ ಅರಣ್ಯೀಕರಣ ಯೋಜನೆ ಆರಂಭವಾಗಲಿದೆ. 113 ನೀರು ಗುಣಮಟ್ಟ ಪರಿಶೀಲನಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.
ದೀರ್ಘಾವಧಿ ಯೋಜನೆಯಡಿ, ವಿದ್ಯುನ್ಮಾನ ಹರಿವು ಕ್ರಮದ ಮೂಲಕ (ಇ-ಫ್ಲೋ) ಮೂಲಕ ಗಂಗೆಯ ನೈಜ ಹರಿವಿಗೆ ಪೂರಕ ವಾತಾವರಣ ನಿರ್ಮಿಸುವುದು, ನೀರಿನ ಬಳಕೆಯಲ್ಲಿ ದಕ್ಷತೆ ಸಾಧಿಸುವುದು ಹಾಗೂ ನೀರಾವರಿ ಸಾಧ್ಯತೆಗಳಲ್ಲಿ ಇನ್ನಷ್ಟು ದಕ್ಷತೆ ತರುವ ಉದ್ದೇಶವನ್ನು ಹೊಂದಲಾಗಿದೆ.
ಗಂಗೆಯ ಸಮಾಜೋ-ಆರ್ಥಿಕ, ಸಾಂಸ್ಕೃತಿಕ ಮಹತ್ವ ಹಾಗೂ ಹಲವು ನೆಲೆಗಳಲ್ಲಿ ಆಗುತ್ತಿರುವ ಶೋಷಣೆಯಿಂದಾಗಿ ಅದನ್ನು ಶುಚಿಗೊಳಿಸುವುದು ನಿಜಕ್ಕೂ ಅತ್ಯಂತ ಸಂಕೀರ್ಣವಾದ ಪ್ರಕ್ರಿಯೆ.ಇಡೀ ಜಗತ್ತಿನಲ್ಲೇ ಇಷ್ಟೊಂದು ಸಂಕೀರ್ಣವಾದ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ ಉದಾಹರಣೆ ಇಲ್ಲ. ಹಾಗಾಗಿ, ಎಲ್ಲ ವಲಯಗಳ ಮೌಲ್ಯಯುತ ಭಾಗವಹಿಸುವಿಕೆ, ಪಾಲುದಾರಿಕೆ ಹಾಗೂ ಪ್ರತಿ ನಾಗರಿಕರ ಭಾಗೀದಾರಿಕೆ ಅತ್ಯಂತ ಅವಶ್ಯ. ಗಂಗಾನದಿಯನ್ನು ಶುಚಿಗೊಳಿಸುವ ಈ ಅಭಿಯಾನದಲ್ಲಿ ಎಲ್ಲರೂ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡಬಹುದಾಗಿದೆ:
- ದೇಣಿಗೆಗಳ ಮೂಲಕ: ಗಂಗೆಯ ವಿಸ್ತಾರ ಮತ್ತು ಹರಿವಿನ ಹಿನ್ನೆಲೆಯಲ್ಲಿ ಅದರ ನೀರಿನ ಗುಣಮಟ್ಟವನ್ನು ಹೆಚ್ಚಳ ಮಾಡುವುದಕ್ಕೆ ಸಿಕ್ಕಾಪಟ್ಟೆ ಹಣ ಬೇಕಾಗಿದೆ. ಕೇಂದ್ರ ಸರಕಾರ ಈಗಾಗಲೇ ಆಯವ್ಯಯದಲ್ಲಿ ನಾಲ್ಕರಷ್ಟು ಅನುದಾನವನ್ನು ಹೆಚ್ಚಳ ಮಾಡಿದೆ. ಆದರೂ ಅದಷ್ಟೇ ಸಾಕಾಗದು. ಈ ಸಂಬಂಧ ಕ್ಲೀನ್ ಗಂಗಾ ಫಂಡ್ (ನಿಧಿ) ನ್ನು ಸ್ಥಾಪಿಸಲಾಗಿದ್ದು, ಸಾರ್ವಜನಿಕರು ದೇಣಿಗೆಯನ್ನು ನೀಡಬಹುದಾಗಿದೆ
- ಕಡಿಮೆಗೊಳಿಸುವುದು, ಪುನರ್ ಬಳಸುವುದು ಹಾಗೂ ಮರಳಿ ಪಡೆಯುವುದು: ಹೀಗೆಂದರೆ ನಾವು ಬಳಸುವ ನೀರು ಮತ್ತು ನಮ್ಮ ಮನೆಗಳಲ್ಲಿನ ಕೊಳಚೆಯನ್ನು ಸಮರ್ಪಕವಾಗಿ ವಿಲೇವಾರಿ ಮಾಡದಿದ್ದರೆ ಅದು ನದಿಗೆ ಸೇರಿ ಕಲುಷಿತಗೊಳಿಸುತ್ತದೆ ಎಂಬುದನ್ನು ನಮ್ಮಲ್ಲಿ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಒಳಚರಂಡಿ ಮೂಲಸೌಲಭ್ಯವನ್ನು ಈಗಾಗಲೇ ಸರಕಾರ ಒದಗಿಸಿದ್ದು, ನಾಗರಿಕರು ನೀರನ್ನು ಮಿತವಾಗಿ ಬಳಸುವುದು ಹಾಗೂ ತ್ಯಾಜ್ಯ ಉತ್ಪತ್ತಿಯನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಬೇಕು. ಒಮ್ಮೆ ಬಳಸಿದ ನೀರನ್ನು ಪುನರ್ ಬಳಸುವ ಮತ್ತು ಸಾವಯವ ತ್ಯಾಜ್ಯವನ್ನು ಪುನರ್ ಬಳಸುವ ಹಾಗೂ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿದರೆ ಈ ಯೋಜನೆಗೆ ಮಾಡುವ ದೊಡ್ಡ ಉಪಕಾರವಾಗಲಿದೆ
ನಮ್ಮ ನಾಗರಿಕತೆಯ ಕುರುಹು ಹಾಗೂ ಸಾಂಸ್ಕೃತಿಕ, ಪರಂಪರೆಯ ಕುರುಹಾಗಿರುವ ರಾಷ್ಟ್ರೀಯ ನದಿ ಗಂಗೆಯ ಪುನರುಜ್ಜೀವನಕ್ಕೆ ಎಲ್ಲರೂ ಕೈ ಜೋಡಿಸೋಣ!