ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಹೈದ್ರಾಬಾದ್ ಸರ್ದಾರ್ ವಲ್ಲಭಬಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡಮಿಯಲ್ಲಿ ಡಿಜಿಪಿ/ಐಜಿಪಿಗಳ ಸಮಾವೇಶವನ್ನುದ್ದೇಶಿಸಿ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದು ನವೆಂಬರ್ 26, ಮುಂಬೈನಲ್ಲಿ ಭೀಕರ ಭಯೋತ್ಪಾದಕ ದಾಳಿ ನಡೆದ ದಿನ, ಅಂದು ಪೊಲೀಸರು ಭಯೋತ್ಪಾದಕರ ವಿರುದ್ಧ ಶೌರ್ಯದಿಂದ ಹೋರಾಡಿದ್ದರು ಎಂದು ಪ್ರಧಾನಿ ಸ್ಮರಿಸಿದರು. ಈವರೆಗೆ ಸುಮಾರು 33 ಸಾವಿರ ಪೊಲೀಸರು ಹುತಾತ್ಮರಾಗಿದ್ದಾರೆ ಎಂಬುದನ್ನೂ ಪ್ರಧಾನಿ ಸ್ಮರಿಸಿದರು.
ಈಗ ನಡೆಯುತ್ತಿರುವ ವಾರ್ಷಿಕ ಸಮಾವೇಶ, ನಡೆಯುತ್ತಿರುವ ರೀತಿಯಲ್ಲಿ ಒಂದು ಪರಿವರ್ತನೆಯಲ್ಲಿ ಸಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇದು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಒಂದು ವೇದಿಕೆಯಾಗಿದ್ದು, ಇದು ನೀತಿ ಯೋಜನೆಗಳನ್ನು ರೂಪಿಸಲು ಉತ್ತಮ ಅಂಶ ನೀಡುತ್ತದೆ ಎಂದರು.
ಆಖೈರಾಗಿರುವ ಕಾರ್ಯಯೋಗ್ಯ ಅಂಶಗಳ ಪೈಕಿ ಸಮಗ್ರ ಫಲಶ್ರುತಿಯ ಬಗ್ಗೆ ಪ್ರಧಾನಮಂತ್ರಿಯವರು ಒತ್ತು ನೀಡಿದರು.
ತರಬೇತಿಯ ಮೇಲೆ ಮಾತನಾಡಿದ ಪ್ರಧಾನಮಂತ್ರಿಯವರು, ಮೃದು ಕೌಶಲ ಅಭಿವೃದ್ಧಿ ಇಂದಿನ ಅಗತ್ಯವಾಗಿದೆ ಮತ್ತು ಇದು ತರಬೇತಿಯ ಅಭ್ಯಾಸದ ಭಾಗವಾಗಬೇಕು ಎಂದರು. ಮಾನವನ ಮನಃಶಾಸ್ತ್ರ ಮತ್ತು ಸ್ವಭಾವದ ಮನೋವಿಜ್ಞಾನಗಳ ಅಂಶಗಳು ತರಬೇತಿಯ ಪ್ರಮುಖ ಭಾಗವಾಗಬೇಕು ಎಂದೂ ಅವರು ಹೇಳಿದರು.
ನಾಯಕತ್ವದ ಕೌಶಲ ಮಹತ್ವದ್ದಾಗಿದೆ ಮತ್ತು ಅಂಥ ಕೌಶಲಗಳನ್ನು ಪೊಲೀಸ್ ಸಿಬ್ಬಂದಿಯಲ್ಲಿ ಮೂಡಿಸುವ ಹೊಣೆ ಹಿರಿಯ ಅಧಿಕಾರಿಗಳದ್ದಾಗಿದೆ ಎಂದು ಹೇಳಿದರು.
ಕಾನೂನು ಮತ್ತು ಸುವ್ಯವಸ್ಥೆಯ ವಿಚಾರದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಗಸ್ತು ಮತ್ತು ಪೊಲೀಸ್ ಪಡೆಯ ಬೇಹುಗಾರಿಕೆಯ ಮಹತ್ವವನ್ನು ಪ್ರತಿಪಾದಿಸಿದರು.
ಸಮಗ್ರ ತರಬೇತಿ ಪ್ರಯತ್ನದ ಮೂಲಕ ಪೊಲೀಸ್ ಪಡೆಯಲ್ಲಿ ಗುಣಾತ್ಮಕ ಬದಲಾವಣೆ ತರುವಂತೆ ಪ್ರಧಾನಮಂತ್ರಿಯವರು ಕರೆ ನೀಡಿದರು. ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲ ಅಂತರ ಸಂಪರ್ಕ ಪೊಲೀಸ್ ಪಡೆ ಪ್ರಗತಿಗೆ ಮಹತ್ವದ್ದು ಎಂದು ತಿಳಿಸಿದರು.
Indian Police at Your Call ಎಂಬ ಮೊಬೈಲ್ ಆಪ್ ಅನ್ನೂ ಪ್ರಧಾನಮಂತ್ರಿಯವರು ಬಿಡುಗಡೆ ಮಾಡಿದರು. ಗಣನೀಯ ಸೇವೆ ಸಲ್ಲಿಸಿದ ಬೇಹುಗಾರಿಕೆ ತಂಡದ ಅಧಿಕಾರಿಗಳಿಗೆ ಪ್ರಧಾನಮಂತ್ರಿಯವರು ಇದೇ ಸಂದರ್ಭದಲ್ಲಿ ರಾಷ್ಟ್ರಪತಿಗಳ ಪೊಲೀಸ್ ಪದಕ ಪ್ರದಾನ ಮಾಡಿದರು.
ಇದಕ್ಕೂ ಮುನ್ನ ಬೆಳಗ್ಗೆ ಪ್ರಧಾನಮಂತ್ರಿಯವರು ರಾಷ್ಟ್ರೀಯ ಪೊಲೀಸ್ ಅಕಾಡಮಿಯಲ್ಲಿ ಹುತಾತ್ಮ ಪೊಲೀಸರ ಅಂಕಣಕ್ಕೆ ಪುಷ್ಪಗುಚ್ಛ ಅರ್ಪಿಸಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುತ್ಥಳಿಗೂ ಪುಷ್ಪ ನಮನ ಸಲ್ಲಿಸಿದರು ಮತ್ತು ಆವರಣದಲ್ಲಿ ಸಸಿಯೊಂದನ್ನು ನೆಟ್ಟರು.