ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ದೆಹಲಿ ಹೈಕೋರ್ಟ್ ಸ್ಥಾಪನೆಯ 50ನೇ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಭಾಗವಹಿಸಿದ್ದರು.
ಕಳೆದ ಐದು ದಶಕಗಳಿಂದ ದೆಹಲಿ ಹೈಕೋರ್ಟ್ ನೊಂದಿಗೆ ಸಂಪರ್ಕ ಹೊಂದಿದ್ದ ಎಲ್ಲರೂ ನೀಡಿರುವ ಕೊಡುಗೆಗೆ ಗೌರವ ಅರ್ಪಿಸಿದರು. ಈ ನಿಟ್ಟಿನಲ್ಲಿ, ಸಂಬಂಧಿತ ಎಲ್ಲರೂ ತಮಗೆ ವಹಿಸಿರುವ ಜವಾಬ್ದಾರಿ ಏನೇ ಇದ್ದರೂ, ಭಾರತ ಸಂವಿಧಾನದ ರೀತ್ಯ ಅದನ್ನು ಪೂರ್ಣಗೊಳಿಸಬೇಕು ಎಂದು ಹೇಳಿದರು.
ಅಕ್ಟೋಬರ್ 31 ಸರ್ದಾರ್ ಪಟೇಲ್ ಅವರ ಜನ್ಮ ದಿನೋತ್ಸವವೂ ಆಗಿದೆ ಎಂದ ಪ್ರಧಾನಮಂತ್ರಿಯವರು, ಸರ್ದಾರ್ ಪಟೇಲ್ ಅವರು ವಕೀಲರೂ ಆಗಿದ್ದರು, ಅವರು ತಮ್ಮ ಜೀವನವನ್ನು ದೇಶ ಸೇವೆಗೆ ಮುಡಿಪಾಗಿಟ್ಟಿದ್ದರು ಎಂದರು. ಅಖಿಲ ಭಾರತ ನಾಗರಿಕ ಸೇವೆ ರಚನೆ ಸೇರಿದಂತೆ ಪಟೇಲ್ ಅವರ ಕೊಡುಗೆಯನ್ನು ಅವರು ಸ್ಮರಿಸಿದರು.
ವ್ಯಾಜ್ಯ ಪರ್ಯಾಯ ಪರಿಹಾರ ವ್ಯವಸ್ಥೆಗೆ ಬಲ ನೀಡುತ್ತಿರುವ ಕಾನೂನು ಸಮುದಾಯಕ್ಕೆ ಪ್ರಧಾನಮಂತ್ರಿಯವರು ಅಭಿನಂದನೆ ಸಲ್ಲಿಸಿದರು. ನ್ಯಾಯಾಂಗದ ಮುಂದೆ ಹೊರಹೊಮ್ಮುತ್ತಿರುವ ಸವಾಲುಗಳನ್ನು ಪ್ರಸ್ತಾಪಿಸಿದ ಅವರು, ಭವಿಷ್ಯಕ್ಕೆ ಮಾರ್ಗದರ್ಶನ ಸಿದ್ಧಪಡಿಸುವಂತೆ ಕರೆ ನೀಡಿದರು.