ಆಲ್ ಜಮ್ಮು ಮತ್ತು ಕಾಶ್ಮೀರ ಪಂಚಾಯತ್ ಕಾನ್ಫರೆನ್ಸ್ ನ 30 ಸದಸ್ಯರ ನಿಯೋಗ ದೆಹಲಿಯ 7, ಲೋಕ್ ಕಲ್ಯಾಣ ಮಾರ್ಗ್ ನಲ್ಲಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು.
ಆಲ್ ಜಮ್ಮು ಮತ್ತು ಕಾಶ್ಮೀರ ಪಂಚಾಯತ್ ಕಾನ್ಫರೆನ್ಸ್ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಪಂಚಾಯ್ತಿ ನಾಯಕರ ಸರ್ವೋನ್ನತ ಸಂಸ್ಥೆಯಾಗಿದೆ. ಈ ಸಂಸ್ಥೆ ಜಮ್ಮು ಮತ್ತು ಕಾಶ್ಮೀರದ 4 ಸಾವಿರ ಗ್ರಾಮ ಪಂಚಾಯ್ತಿಗಳನ್ನು ಪ್ರತಿನಿಧಿಸುತ್ತದೆ. ಇದರಲ್ಲಿ 4 ಸಾವಿರ ಸರಪಂಚರು ಮತ್ತು 29 ಸಾವಿರ ಪಂಚರಿದ್ದಾರೆ. ಈ ನಿಯೋಗದ ನೇತೃತ್ವವನ್ನು ಆಲ್ ಜಮ್ಮು ಮತ್ತು ಕಾಶ್ಮೀರ್ ಪಂಚಾಯತ್ ಕಾನ್ಫರೆನ್ಸ್ ಅಧ್ಯಕ್ಷ ಶ್ರೀ. ಶಫೀಕ್ ಮಿರ್ ವಹಿಸಿದ್ದರು.
ನಿಯೋಗದ ಸದಸ್ಯರು, ರಾಜ್ಯಕ್ಕೆ ಸಂಬಂಧಿಸಿದ ಅಭಿವೃದ್ಧಿ ವಿಚಾರಗಳ ಬಗ್ಗೆ ಪ್ರಧಾನಮಂತ್ರಿಯವರಿಗೆ ವಿವರಿಸಿದರು ಮತ್ತು ಪಂಚಾಯ್ತಿಗಳ ಸಬಲೀಕರಣ ಆಗದ ಕಾರಣ ದೇಶದ ಇತರ ರಾಜ್ಯಗಳಂತೆ ರಾಜ್ಯಕ್ಕೆ ಬರುವ ಕೇಂದ್ರದ ನೆರವು ಹಳ್ಳಿಗಳನ್ನು ತಲುಪಿಲ್ಲ ಎಂದು ಹೇಳಿದರು. ಅವರು ಮನವಿ ಪತ್ರವನ್ನೂ ಅರ್ಪಿಸಿದರು. ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳಿಗೆ ಅನ್ವಯಿಸುವ ಭಾರತ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಯನ್ನು ವಿಸ್ತರಿಸುವ ವಿಚಾರ ಪರಿಗಣಿಸುವಂತೆ ಪ್ರಧಾನಮಂತ್ರಿಯವರಿಗೆ ಮನವಿ ಮಾಡಿದರು. ಶೀಘ್ರವೇ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ಮತ್ತು ಪಂಚಾಯ್ತಿಗಳಿಗೆ ಚುನಾವಣೆ ನಡೆಸುವಂತೆ ಒತ್ತಾಯಿಸಿದರು. 2011ರಲ್ಲಿ ನಡೆದ ಚುನಾವಣೆಯಲ್ಲಿ ಮತದಾರರಿಂದ ಅಭೂತಪೂರ್ವ ಉತ್ಸಾಹ ವ್ಯಕ್ತವಾಗಿತ್ತು ಎಂದೂ ಹೇಳಿದರು.
ಈ ಸಾಂವಿಧಾನಿಕ ಅವಕಾಶವನ್ನು ವಿಸ್ತರಿಸುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಅಭಿವೃದ್ಧಿ ಚಟುವಟಿಕೆ ಕೈಗೆತ್ತಿಕೊಳ್ಳಲು ಪಂಚಾಯ್ತಿಗಳಿಗೆ ರಾಜ್ಯ ಬಲ ನೀಡಬಹುದಾಗಿದೆ ಎಂದೂ ಅವರು ತಿಳಿಸಿದರು. ಇದು ರಾಜ್ಯದ ಅಭಿವೃದ್ಧಿ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತದೆ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಲಾಭವನ್ನು ರಾಜ್ಯದ ಜನತೆ ಪಡೆಯಲು ಅವಕಾಶ ನೀಡುತ್ತದೆ ಎಂದೂ ಸದಸ್ಯರು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಸದ್ಯದ ಪರಿಸ್ಥಿತಿಯ ಬಗ್ಗೆಯೂ ನಿಯೋಗ ಪ್ರಧಾನಮಂತ್ರಿಯವರಿಗೆ ವಿವರಣೆ ನೀಡಿತು. ರಾಷ್ಟ್ರ ವಿರೋಧಿ ಶಕ್ತಿಗಳು ಶಾಲೆಗಳನ್ನು ಸುಡುತ್ತಿರುವುದನ್ನು ಅವರು ಬಲವಾಗಿ ಖಂಡಿಸಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಬೇರು ಮಟ್ಟದ ಜನರನ್ನು ಪ್ರತಿನಿಧಿಸುವ ಈ ಸಂಸ್ಥೆ, ದೇಶದ ಪ್ರಜಾಪ್ರಭುತ್ವದ ಸಂಸ್ಥೆಗಳು ಮತ್ತು ಪ್ರಕ್ರಿಯೆಗಳ ಮೇಲೆ ವಿಶ್ವಾಸವನ್ನು ಪುನರುಚ್ಚರಿಸಿತು. ಶ್ರೀ ಶಫಿಕ್ ಮಿರ್ ಅವರು, ರಾಜ್ಯದ ಬಹು ಸಂಖ್ಯೆಯ ಜನರು ಶಾಂತಿಯುತ ಮತ್ತು ಗೌರವಯುತ ಜೀವನ ನಡೆಸಲು ಬಯಸುತ್ತಾರೆ ಎಂದು ಹೇಳಿದರು. ಪಟ್ಟಭದ್ರ ಹಿತಾಸಕ್ತಿಗಳು ಯುವಕರನ್ನು ಶೋಷಿಸುತ್ತಿದ್ದು, ಅವರ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿವೆ ಎಂದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಗೊಳಿಸಲು ವೈಯಕ್ತಿಕ ಆಸಕ್ತಿ ತೆಗೆದುಕೊಳ್ಳುವಂತೆ ಅವರು ಪ್ರಧಾನಿಯವರಿಗೆ ಮನವಿ ಮಾಡಿದರು.
ಅವರ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಗಮನ ನೀಡಲಿದೆ ಎಂದು ಪ್ರಧಾನಮಂತ್ರಿಯವರು ನಿಯೋಗಕ್ಕೆ ಆಶ್ವಾಸನೆ ನೀಡಿದರು. ತಮ್ಮ ಕಾರ್ಯಕ್ರಮ ಪಟ್ಟಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿ ಪ್ರಧಾನ ಆದ್ಯತೆ ಆಗಿದೆ ಎಂದೂ ತಿಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಜನ ಜೀವಿಸುವ ಹಳ್ಳಿಗಳ ಅಭಿವೃದ್ಧಿ ರಾಜ್ಯದ ಒಟ್ಟಾರೆ ಆರ್ಥಿಕ ಅಭಿವೃದ್ಧಿಗೆ ಮಹತ್ವದ್ದಾಗಿದೆ ಎಂದೂ ಅವರು ಹೇಳಿದರು. ಮಾನವೀಯ ನಿಲುವಿನ ಪುನರುಚ್ಚಾರ ಮಾಡಿದ ಪ್ರಧಾನಿಯವರು, ವಿಕಾಸ ಮತ್ತು ವಿಶ್ವಾಸ ಕೇಂದ್ರ ಸರ್ಕಾರ, ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ರೂಪಿಸಿರುವ ಉಪಕ್ರಮದಲ್ಲಿ ಮೂಲೆಗಲ್ಲುಗಳಾಗಿ ಮುಂದುವರಿದಿವೆ ಎಂದು ಹೇಳಿದರು.