ಪ್ರಮಾಣ್ ಅಮ್ಮಾ
ವೇದಿಕೆಯ ಮೇಲಿರುವ ಗೌರವಾನ್ವಿತ ಗಣ್ಯರೇ,
ನಮಸ್ಕಾರಮ್!
ಈ ಪವಿತ್ರ ಮತ್ತು ಪೂಜ್ಯ ಸಂದರ್ಭದಲ್ಲಿ, ನಾನು ಅಮ್ಮನಿಗೆ ನನ್ನ ಗೌರವ ಸಲ್ಲಿಸುತ್ತೇನೆ. ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಲಿ ಎಂದು ನಾನು ಭಗವಂತನನ್ನು ಪ್ರಾರ್ಥಿಸುತ್ತೇನೆ. ಅವರು ಲಕ್ಷಾಂತರ ಭಕ್ತರಿಗೆ ದಾರಿದೀಪವಾಗಿದ್ದಾರೆ. ಅದಷ್ಟೇ ಅಲ್ಲ, ಅವರು ಹಲವು ಭಕ್ತರಿಗೆ ಬದುಕಿನ ಸಮಾನಾರ್ಥಕವಾಗಿದ್ದಾರೆ. ನಿಜವಾದ ಅಮ್ಮನಂತೆಯೇ ಅವರು ತಮ್ಮ ಭಕ್ತರನ್ನು ಪ್ರತ್ಯಕ್ಷ ಮತ್ತು ಪರೋಕ್ಷ ಕ್ರಮಗಳಿಂದ ಹಾಗೂ ಸಾದೃಶ ಮತ್ತು ಅಸಾದೃಶ ಕರಗಳಿಂದ ಪಾಲಿಸುತ್ತಿದ್ದಾರೆ.
ಅಮ್ಮನ ಆಶೀರ್ವಾದ ಮತ್ತು ಬೇಷರತ್ ಪ್ರೀತಿಗೆ ಪಾತ್ರರಾಗಿರುವ ಪೈಕಿ ನಾನೂ ಒಬ್ಬನಾಗಿರುವುದು ನನ್ನ ಸೌಭಾಗ್ಯ. ಮೂರು ವರ್ಷಗಳ ಹಿಂದೆ, ಅಮ್ಮನ 60ನೇ ಜನ್ಮ ಜಯಂತಿಯಂದು ನಾನು ಅಮೃತಾಪುರಿಯಲ್ಲಿ ಇರುವ ಅವಕಾಶ ಪಡೆದಿದ್ದೆ. ಇಂದು ನಾನು ಖುದ್ದು ಈ ಆಚರಣೆಯಲ್ಲಿ ಪಾಲ್ಗೊಳ್ಳುವಷ್ಟು ಅದೃಷ್ಟವಂತನಲ್ಲದಿದ್ದರೂ, ಅವರಿಗೆ ತಂತ್ರಜ್ಞಾನದ ಮೂಲಕ ಶುಭಕೋರಿರುವುದಕ್ಕೆ ಹರ್ಷಚಿತ್ತನಾಗಿದ್ದೇನೆ. ನಾನು ಈಗಷ್ಟೇ ಕೇರಳದಿಂದ ಮರಳಿದ್ದೇನೆ ಮತ್ತು ಕೇರಳದ ಜನತೆ ನನಗೆ ತೋರಿದ ಪ್ರೀತ್ಯಾದರಗಳು ನನ್ನ ಹೃದಯ ತಟ್ಟಿವೆ.
ಭಾರತವು ಎಲ್ಲ ವಸ್ತುವಿನಲ್ಲೂ ದೇವರನ್ನು ಕಾಣುವಂತಹ ಸಂತರ ನಾಡು. ಮನುಕುಲ ಇದರಲ್ಲಿ ಪ್ರಮುಖವಾದುದಾಗಿದೆ. ಹೀಗಾಗಿಯೇ ಮಾನವಕುಲದ ಸೇವೆ ಅವರ ಪರಮ ದ್ಯೇಯವಾಗಿದೆ. ಅಮ್ಮ ತಮ್ಮ ಬಾಲ್ಯದಲ್ಲಿಯೇ ತಮ್ಮ ಊಟವನ್ನೇ ಇತರರಿಗೆ ಕೊಡುತ್ತಿದ್ದರು ಎಂಬುದನ್ನು ನಾನು ಅರಿತಿದ್ದೇನೆ. ವೃದ್ಧರು ಮತ್ತು ಹಿರಿಯರು ಹಾಗೂ ಅಗತ್ಯವಿರುವವರ ಸೇವೆ ಆಕೆಗೆ ಬಾಲ್ಯದಿಂದಲೂ ಬಂದ ಬಳುವಳಿಯಾಗಿದೆ.
ಜೊತೆಗೆ ಅಮ್ಮ ತಮ್ಮ ಬಾಲ್ಯದಿಂದಲೂ ಭಗವಾನ್ ಕೃಷ್ಣನನ್ನು ಪೂಜಿಸುತ್ತಾ ಬಂದಿದ್ದಾರೆ.
ಈ ಎರಡು ಗುಣಗಳೇ ಅವರ ಶಕ್ತಿಯಾಗಿದೆ. ದೇವರ ಮೇಲಿನ ಭಕ್ತಿ ಮತ್ತು ಬಡವರ ಬಗ್ಗೆ ಇರುವ ಬದ್ಧತೆ ಅದಾಗಿದೆ. ಅಮ್ಮನೊಂದಿಗೆ ನನ್ನ ಒಡನಾಟದಲ್ಲಿ ನಾನು ವೈಯಕ್ತಿಕವಾಗಿ ಈ ಸಂದೇಶ ಪಡೆದುಕೊಂಡಿದ್ದೇನೆ. ವಿಶ್ವದಾದ್ಯಂತದ ಲಕ್ಷಾಂತರ ಭಕ್ತರೂ ಇದನ್ನೇ ನಂಬಿದ್ದಾರೆ.
ಅಮ್ಮ ನಡೆಸುತ್ತಿರುವ ಹಲವು ಸಂಸ್ಥೆಗಳು ಮತ್ತು ಕಾರ್ಯಕ್ರಮಗಳಲ್ಲಿ ಸಮಾಜ ಸೇವೆ ಮತ್ತು ದತ್ತಿ ಕಾರ್ಯಗಳು ನಡೆಯುತ್ತಿರುವ ಬಗ್ಗೆ ನನಗೆ ತಿಳಿದಿದೆ. ಆಕೆ ವಿಶ್ವದ ಬಡ ಜನರ ಐದು ಅತ್ಯಾವಶ್ಯಕತೆಗಳಾದ ಆಹಾರ, ವಸತಿ, ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಜೀವನೋಪಾಯಕ್ಕೆ ಸದಾ ನೆರವಾಗುತ್ತಿದ್ದಾರೆ.
ಅವರು ಮಾಡಿರುವ ಕಾರ್ಯಗಳು ಅದರಲ್ಲೂ ನೈರ್ಮಲ್ಯ, ನೀರು, ವಸತಿ, ಶಿಕ್ಷಣ ಮತ್ತು ಆರೋಗ್ಯಕ್ಕೆ ಅವರು ನೀಡಿರುವ ದಾನವನ್ನು ನಾನು ಉಲ್ಲೇಖಿಸಬಯಸುತ್ತೇನೆ. ಅಂಥ ಕೆಲವು ಫಲಾನುಭವಿಗಳು ಇಂದು ಪ್ರಮಾಣಪತ್ರ ಪಡೆಯುತ್ತಾರೆ ಎಂದು ನಾನು ತಿಳಿದುಕೊಂಡಿದ್ದೇನೆ. ಅದರಲ್ಲೂ, ಅಮ್ಮ ಶೌಚಾಲಯ ನಿರ್ಮಿಸುವಂತೆ ನೀಡಿರುವ ಕರೆ ನಮ್ಮ ಸ್ವಚ್ಛ ಭಾರತ ಕಾರ್ಯಕ್ರಮಕ್ಕೆ ದೊಡ್ಡ ನೆರವಾಗಿದೆ. ಕೇರಳದ ನೈರ್ಮಲ್ಯ ಪ್ರಯತ್ನಗಳಿಗೆ ಅಮ್ಮ ಒಂದು ನೂರು ಕೋಟಿ ರೂಪಾಯಿ ನೆರವು ನೀಡಲು ಸಂಕಲ್ಪಿಸಿದ್ದಾರೆ. ಇದರಲ್ಲಿ ಬಡವರಿಗೆ 15 ಸಾವಿರ ಶೌಚಾಲಯ ನಿರ್ಮಾಣ ಮಾಡುವುದೂ ಸೇರಿದೆ. ಅಮ್ಮ ಆಶ್ರಮ ಈಗಾಗಲೇ ರಾಜ್ಯದಾದ್ಯಂತ 2 ಸಾವಿರ ಶೌಚಾಲಯ ನಿರ್ಮಾಣ ಕಾರ್ಯ ಪೂರ್ಣಗೊಳಿಸಿದೆ ಎಂದು ನಾನು ಕೇಳಲ್ಪಟ್ಟಿದ್ದೇನೆ.
ಪರಿಸರ ಉಳಿಸುವ ಮತ್ತು ಆ ಕ್ಷೇತ್ರದ ಸುಸ್ಥಿರತೆಗೆ ಅವರು ಕೈಗೊಂಡ ಹಲವು ಕ್ರಮಗಳಲ್ಲಿ ಇದು ಒಂದು ಉದಾಹರಣೆ ಮಾತ್ರ. ಒಂದು ವರ್ಷದ ಹಿಂದೆ, ಅಮ್ಮ ನಮಾಮಿ ಗಂಗೆ ಕಾರ್ಯಕ್ರಮಕ್ಕೆ ಉದಾರವಾಗಿ 100 ಕೋಟಿ ರೂಪಾಯಿಗಳನ್ನು ದಾನವಾಗಿ ನೀಡಿದ್ದರು. ಪ್ರಕೃತಿ ವಿಕೋಪದ ಬಳಿಕ ನರಳುತ್ತಿರುವವರಿಗೂ ಅಮ್ಮ ನೆರವಿನ ಹಸ್ತ ಚಾಚಿದ್ದಾರೆ ಎಂಬುದು ನನಗೆ ತಿಳಿದಿದೆ. ವಿಶ್ವದ ಕೆಲವು ಒತ್ತಡದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಮೃತ ವಿಶ್ವವಿದ್ಯಾಲಯದ ಸಂಶೋಧಕರು ಹೊಸ ಮಾರ್ಗ ಹುಡುಕುತ್ತಿದ್ದಾರೆ ಎಂಬುದನ್ನು ಕೇಳಿ ಹೃದಯ ತುಂಬಿಬಂತು.
ಕೊನೆಯದಾಗಿ, ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ನನಗೆ ಅವಕಾಶ ನೀಡಿದ್ದಕ್ಕಾಗಿ ನಾನು ಹೃತ್ಪೂರ್ವಕವಾಗಿ ಧನ್ಯವಾದ ಅರ್ಪಿಸುತ್ತೇನೆ.
ಮತ್ತೊಮ್ಮೆ ಅಮ್ಮನಿಗೆ ನನ್ನ ಪ್ರಮಾಣಗಳನ್ನು ಸಲ್ಲಿಸುತ್ತೇನೆ.